ನರ್ಮದಾಶಂಕರ
	1833-1866. ಗುಜರಾತೀ ಸಾಹಿತ್ಯದ ಆಧುನಿಕ ಯುಗದ ಪ್ರಾರಂಭಕಾರರಲ್ಲಿ ಒಬ್ಬ. ಪೂರ್ಣ ಹೆಸರು ನರ್ಮದಾಶಂಕರ ಲಾಲಶಂಕರ ದವೇ. ಹುಟ್ಟಿದ್ದು ಹಾಗೂ ಕಲಿತಿದ್ದು ಸೂರತ್ ನಗರದಲ್ಲಿ. ತಂದೆ ಲಾಲಶಂಕರ ನಾಗರ ಬ್ರಾಹ್ಮಣ; ಸೂರತ್‍ನಲ್ಲಿ ಜೀವನ ನಡೆಸಲು ಅಸಾಧ್ಯವಾಗಿ ಮುಂಬಯಿಗೆ ಹೋಗಿ ಬರೆವಣಿಗೆಯಿಂದ ಉದರಂಭರಣ ಮಾಡತೊಡಗಿದ. ಮಗ ಅಲ್ಲಿನ ಎಲಿಫಿನ್‍ಸ್ಟನ್ ಸಂಸ್ಥೆಯಲ್ಲಿ ಕಲಿತು ಕಾಲೇಜು ಸೇರಿದ. ಅಲ್ಲಿ ಓದುತ್ತಿರುವಾಗಲೇ ಮದುವೆಯಾಯಿತು. ಕೂಡಲೇ ಸೂರತ್ತಿಗೆ ಹೋಗಿ 15 ರೂಪಾಯಿ ಸಂಬಳದ ಕೆಲಸವೊಂದನ್ನು ಹಿಡಿದು ಸಂಸಾರ ನಿರ್ವಹಿಸತೊಡಗಿದ. ಹೆಂಡತಿ ಸತ್ತಳು. ಮತ್ತೆ ಮುಂಬಯಿಗೆ ಹೋಗಿ ಅರ್ಧಕ್ಕೇ ನಿಂತ ಶಿಕ್ಷಣವನ್ನು ಪೂರೈಸಿಕೊಂಡು ಕೆಲಕಾಲ ಶಿಕ್ಷಕನಾದ. ಅನಂತರ ಪತ್ರಕರ್ತನಾಗಿ ಸಾಹಿತಿಯಾಗಿ ಜೀವನ ನಡೆಸಿದ. ಒಳ್ಳೆಯ ವಾಗ್ಮಿಯಾದ ಈತ ತನ್ನ ಓಜಸ್ವೀ ಭಾಷಣಗಳಿಂದ, ಜನತೆಯಲ್ಲಿ ತುಂಬಿ ತುಳುಕುತ್ತಿದ್ದ ಮೌಢ್ಯ, ಆಲಸ್ಯ, ಸಂಪ್ರದಾಯಶರಣತೆಗಳನ್ನು ದೂರಮಾಡಲು ಯತ್ನಿಸಿದ. ಅದಕ್ಕೆಂದು `ಬುದ್ಧಿವರ್ಧಕ ಸಭಾ ಸ್ಥಾಪಿಸಿದ. ಸ್ವತಃ ವಿಧವಾ ವಿವಾಹವನ್ನು ಮಾಡಿಕೊಂಡು ಸಮಾಜದಲ್ಲಿ ವಿಧವೆಯರಿಗಿದ್ದ ಹೀನ ಅವಸ್ಥೆಯನ್ನು ಖಂಡಿಸಿದ. ಸಮಾಜದ ಸುಧಾರಣೆಗೆಂದು ಡಾಂಡಿಯೊಂ ಎಂಬ ಪಾಕ್ಷಿಕ ಪತ್ರಿಕೆಯೊಂದನ್ನು ಪ್ರಕಟಿಸಿದ. ಆರ್ಥಿಕ ಇತ್ಯಾದಿ ಏನೇ ಮುಗ್ಗಟ್ಟು ಬಂದರೂ ಲೆಕ್ಕಿಸದೆ ಸುಮಾರು 25 ವರ್ಷ ಲೇಖನಿಯನ್ನು ಗದ್ಯ, ಪದ್ಯ, ನಾಟಕ, ಆತ್ಮಚರಿತೆ, ಶಾಸ್ತ್ರ, ಸಮಾಜ ಸುಧಾರಣೆಗಳಿಗೆ ಬಳಸಿದ. ಗುಜರಾತೀ ಹೊಸ ಸಾಹಿತ್ಯದ ಮೊದಲ ಕಾಲಖಂಡವನ್ನು ನರ್ಮದಾಯುಗ ಎಂದು ಹೇಳಲಾಗುತ್ತದೆ. ಅರ್ವಾಚೀನರಲ್ಲಿ ಆದ್ಯನೆಂದು ಈತನನ್ನು ಕೆ.ಎಂ. ಮುನ್ಷಿ ಪ್ರಶಂಸಿಸಿದ್ದಾರೆ.

	ನರ್ಮದಾನ ಸಾಹಿತ್ಯಸೃಷ್ಟಿ ವಿಪುಲ. ಸ್ಥೂಲವಾಗಿ ಅದನ್ನು ಕೆಳಗಿನಂತೆ ವಿವರಿಸಬಹುದು - ಗದ್ಯ, ನರ್ಮಗದ್ಯ, ನರ್ಮಕಥಾಕೋಶ, ಧರ್ಮವಿಚಾರ, ಜುನಂ ನರ್ಮಗದ್ಯ, ರಾಜ್ಯರಂಗ. ಪದ್ಯ: ನರ್ಮಕವಿತಾ, ನಾಗರ ಸ್ತ್ರೀಯೋಮಾಂಗವಾತಾಂ ಗೀತೋಂ, ಹಿಂದೂ ಓನೀ ಪಡತಿ, ವೀರಸಿಂಹ, ರೂದನ ರಸಿಕ. ನಾಟಕ: ಸಾರ ಶಾಕುಂತಲ, ರಾಮಜಾನಕೀ ದರ್ಶನ, ದ್ರೌಪದೀ ದರ್ಶನ, ಬಾಲಕೃಷ್ಣವಿಜಯ, ಕೃಷ್ಣಾಕುಮಾರಿ. ಆತ್ಮಚರಿತ: ಮಾರೀ ಹಕೀಕತ್. ಶಾಸ್ತ್ರ: ಅಲಂಕಾರ ಪ್ರವೇಶ, ಪಿಂಗಳ ಪ್ರವೇಶ, ನರ್ಮಕೋಶ.

	ನರ್ಮದಾನ ಗದ್ಯ, ಆಂಗ್ಲ ಸಾಹಿತ್ಯದ ಪ್ರಭಾವದಿಂದ ಗುಜರಾತೀ ಭಾಷೆಯಲ್ಲಿ ಅದುವರೆಗೂ ಪ್ರಚಲಿತವಿದ್ದ ಪದ್ಧತಿಯನ್ನು ಬಿಟ್ಟು ಬೇರೊಂದು ದಿಶೆಯಲ್ಲಿ ಹರಿಯಲು ಪ್ರಾರಂಭಿಸಿತು. ಅದು ತರುವಾಯದಲ್ಲಿ ಬಂದ ದಯಾರಾಮ ಮೊದಲಾದವರ ಮೇಲೆ ವಿಶೇಷ ಪ್ರಭಾವ ಬೀರಿತು. ನರ್ಮದಾನ ಶೈಲಿ ಭಾವಪೂರ್ಣವಾಗಿದ್ದು ತೀವ್ರಪರಿಣಾಮಕಾರಿಯಾದುದು. ಅವನ ಪದ್ಯ ಶೈಲಿಯೂ ಈ ಗುಣವನ್ನು ಗರ್ಭೀಕರಿಸಿಕೊಂಡಿದೆ. ಹಿಂದೂ ಓನೀ ಷಡತಿ ಆತನ ಕಾವ್ಯಗಳಲ್ಲಿ ಪ್ರಾತಿನಿಧಿಕ ಕಾವ್ಯವೆಂದು ಪರಿಗಣಿಸಲಾಗಿದೆ.

	ಆತನ ಕವಿತೆಗಳಲ್ಲಿ ಜಯ ಜಯ ಗರವೀ ಗುಜರಾತ! ಎಂಬುದು ಸಮಗ್ರ ರಾಷ್ಟ್ರಭಕ್ತಿಯನ್ನು ಸ್ಫುರಿಸುವ ನಾಡಗೀತೆಯಾಗಿದೆ. ಗುಜರಾತೀ ಕಾವ್ಯಕ್ಷೇತ್ರದಲ್ಲಿ ನರ್ಮದಾ ಕಲಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವನ ಬರೆವಣಿಗೆಯಲ್ಲಿ ಜೀವನ ಮಂತ್ರ, ಪ್ರೇಮಶೌರ್ಯ, ಭಾವಗುಂಜನ- ಇವು ಅಚ್ಚೊತ್ತಿ ನಿಂತಿವೆಯೆಂದು ವಿದ್ವಾಂಸರ ಅಭಿಪ್ರಾಯ. ಅಂತೆಯೇ ಅರುಣುಂ ಪರಭಾತ್ (ಅರುಣೋದಯ)ದಲ್ಲಿನ ಕವಿಗಳಲ್ಲಿ ಅವನಿಗೆ ಅಗ್ರಪೀಠ. ಅವನ ಮಾರೀ ಹಕೀಕತ್ ಮಹಾತ್ಮಾ ಗಾಂಧೀಜಿಯವರಿಗೆ ಅವರ ಆತ್ಮಕಥೆಯನ್ನು ಬರೆಯುವಲ್ಲಿ ಒಂದು ಆದರ್ಶ ಕೃತಿಯಾಗಿತ್ತೆಂದು ಕೆಲವರ ನಂಬುಗೆ. ಭಾರತೀಯರ ವಿಚಾರಧಾರೆಯನ್ನು ಗುಜರಾತೀ ಭಾಷೆಯ ಮೂಲಕ ಪ್ರಗತಿಯತ್ತ ಹರಿಸಲು ದುಡಿದ ಶ್ರೇಷ್ಠ ವ್ಯಕ್ತಿ ನರ್ಮದಾ ಶಂಕರ.		
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ